ಕಪುಚಿನ್ ಕೋತಿ : ಸಿಬಸ್ ಕಪುಸಿನಸ್ ಎಂಬ ಶಾಸ್ತ್ರೀಯ ಹೆಸರಿನ ಕೋತಿ. ಪ್ರೈಮೇಟುಗಳ ಗಣದ ಪ್ಲಾಟಿರೈನಿ ಬುಡಕಟ್ಟಿನ ಸಿಬಿಡೀ ಕುಟುಂಬಕ್ಕೆ ಸೇರಿದೆ. ಅಮೆರಿಕದ ಉಷ್ಣವಲಯಗಳಲ್ಲಿ ಸಿಕ್ಕುವ ಇದು ನಿಕರಾಗುವದಿಂದ ಪರಗ್ವೆಯವರೆಗೂ ಹರಡಿದೆ. ಬಾಲ ಸುರುಳಿ ಸುತ್ತಿಕೊಳ್ಳಬಲ್ಲುದು. ಇದೇ ಕುಟುಂಬದ ಇತರ ಕೋತಿಗಳೊಂದಿಗೆ ಹೋಲಿಸಿದರೆ ಇದರ ಬಾಲ ಬಹಳ ಚಿಕ್ಕದು ಮತ್ತು ಇದರಲ್ಲಿ ಕುಂಡೆಗಳ ಮೇಲೆ ರೋಮಗಳಿವೆ. ಗಾತ್ರದಲ್ಲಿ ಇದು ಬೆಕ್ಕಿನಂತಿದೆ. ಮೈ ಮೇಲಿನ ಕೂದಲು ಉಣ್ಣೆಯಂತಿಲ್ಲ.

ಸಾಮಾನ್ಯವಾಗಿ ಇವು ಗುಂಪು ಗುಂಪಾಗಿ ಎತ್ತರವಾದ ಮರಗಳ ಮೇಲೆ ಓಡಾಡಿಕೊಂಡಿರುತ್ತವೆ. ಹಣ್ಣು, ಎಳೆಯ ಕಾಂಡ, ಮೊಗ್ಗುಗಳು, ಕೀಟಗಳು, ಮೊಟ್ಟೆ ಮತ್ತು ಮರಿಹಕ್ಕಿಗಳು ಇವುಗಳ ಪ್ರಧಾನ ಆಹಾರ. ಇವನ್ನು ಹಿಡಿದು ಸುಲಭವಾಗಿ ಪಳಗಿಸಬಹುದು. ಬಹಳ ಸಾಧು ಪ್ರಾಣಿಗಳಾದ ಇವು ಮನೆಯಲ್ಲಿ ಹಾಗೂ ಪ್ರಾಣಿ ಸಂಗ್ರಹಾಲಯಗಳಲ್ಲಿ ಸಾಕಲು ಯೋಗ್ಯವಾದುವು. (ನೋಡಿ- ಪ್ರೈಮೇಟುಗಳು) (ಎಚ್.ಬಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ